ಅಮೂರ್ತರೂಪ

	ಹೆಚ್ಚು ಕಡಿಮೆ ಪೂರ್ತಿಯಾಗಿ ಚಿತ್ರಕಲೆ, ಶಿಲ್ಪಕಲೆಗಳಿಗೆ ಸಂಬಂಧಪಟ್ಟ ವಿಚಾರ. ಮಾನವಪ್ರಪಂಚವನ್ನಾಗಲಿ ಪ್ರಕೃತಿಪ್ರಪಂಚವನ್ನಾಗಲಿ ಲಲಿತಕಲೆ ಅನುಕರಿಸಲೇಬೇಕೆಂಬ ನಿಯಮ ಬಲು ಹಿಂದಿನಿಂದ ಉಪದೇಶಿತವಾಗಿ 19ನೆಯ ಶತಮಾನದ ಎರಡನೆಯ ಭಾಗದವರೆಗೂ ನಡೆದುಬಂತು. ಆಗ ಅದಕ್ಕೆ ವಿರೋಧವಾದ ಅಭಿಪ್ರಾಯಗಳು ತಲೆಯೆತ್ತಿದವು. ನಕಲು ತೆಗೆಯುವುದಲ್ಲ ಕಲೆಯ ಕಾರ್ಯ, ಪ್ರತಿಚಿತ್ರವನ್ನು ನಿರ್ಮಿಸುವುದೂ ಅಲ್ಲ, ಎಂಬುದು ಒಂದು ವಾದ. ಹಾಗಾದರೆ ಯಾವುದು ಕಲೆಗಾರನ ಉದ್ಯೋಗ? ಪ್ರಕೃತಿಯ ಅವಲೋಕನದಿಂದ ಅವನ ಉದ್ಯಮ ಪ್ರಾರಂಭವಾಗುತ್ತದೆ. ನೋಟಕನ ಮನಸ್ತøಪ್ತಿಯಿಂದ ಅದಕ್ಕೆ ಮಂಗಳಾಂತ ದೊರಕುತ್ತದೆ. ಅದಕ್ಕಾಗಿ ಕಣ್ಣು ಕೋರೈಸುವ ಬಣ್ಣಗಳ ಮೂಲಕ ವಿವಿಧ ನಕಾಶೆಗಳನ್ನು ಅವನು ತಯಾರಿಸಬೇಕು. ಒಂದು ಪಂಗಡದವರು (ಲೆ ಫಾವ್ಸ್) ಹೀಗೆ ಘೋಷಿಸಿದರು. ಇನ್ನೊಂದು ಗುಂಪಿನವರು (ದಿ ಕ್ಯೂಬಿಸ್ಟ್ಸ್) ವಸ್ತುಗಳ ಬಾಹ್ಯಾಕೃತಿಯ ಹಿಂದೆ ರೇಖಾಗಣಿತದ ಆಕೃತಿಗಳು ಇವೆ ಎಂದರು. ಇನ್ನೂ ಮುಂದು ಹೋದರು ಅಮೂರ್ತರೂಪದ (ಆಬ್‍ಸ್ಟ್ರಾಕ್ಟ್ ಫಾರಮ್) ಗುಂಪಿನವರು. ಇವರಿಗೆ ಪ್ರಕೃತಿಯ ಪದಾರ್ಥಗಳೇ ಅನಾವಶ್ಯಕ; ಬರಿ ನಕಾಶೆಗಳೂ ಆಕಾರಗಳೂ ಸಾಕು. ಅವನ್ನು ಕಲೆಯ ಸಾಧನಸಾಮಗ್ರಿಗಳಿಗೆ ಅನುಗುಣವಾಗಿ ಹೊಂದಿಸಿಟ್ಟರೆ ಯಾವುದೋ ಅವ್ಯಕ್ತಾಕೃತಿ ಪ್ರೇಕ್ಷಕನ ಮನಸ್ಸಿಗೆ ಮಿಂಚಿಹೊಳೆಯುತ್ತದೆ.

	ಈ ಅಭಿಪ್ರಾಯ ಸಾಹಿತ್ಯಕ್ಕೆ ಸಾಧನವಾದ ಭಾಷೆಗೆ ಅಷ್ಟೊಂದು ಅನ್ವಯವಾದಂತೆ ತೋರುವುದಿಲ್ಲ. ವಿಲಕ್ಷಣ ವಿಮರ್ಶಕರಲ್ಲಿ ಅಲ್ಲಿ ಇಲ್ಲಿ ಅದರ ಪ್ರತಿಧ್ವನಿ ಕೇಳಿಬಂದರೂ ಬರಬಹುದು. 						
(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ